/ anna-bhagya

ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದ ‘ಅನ್ನಭಾಗ್ಯ’

ಹಸಿವು ಮುಕ್ತ ಕರ್ನಾಟಕದ ಮಹತ್ತರ ಕನಸನ್ನು ಹೊತ್ತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ಬಡ ಜನರಿಗಾಗಿ ‘ಅನ್ನಭಾಗ್ಯ ಯೋಜನೆ’ಯನ್ನು ಅನುಷ್ಠಾನಗೊಳಿಸಿದರು.

ಇಂತಹ ಜನಪರ ಯೋಜನೆಗಳನ್ನು ಜಾರಿಗೆ ತರಲು ಅದರ ಹಿಂದೆ ಬಲವಾದ ಕಾರಣಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬರುವ ಹಿಂದೆ ಅದರದ್ದೇ ಆದ ಒಂದು ಸಣ್ಣ ಕಥೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಂದಿನಲ್ಲಿ ಅನುಭವಿಸಿದ ನಿಕೃಷ್ಟ ಬದುಕೇ ಅನ್ನಭಾಗ್ಯ ಯೋಜನೆ ಜಾರಿಗೆ ಬರಲು ಮುಖ್ಯ ಪ್ರೇರಣೆಯಾಗಿದೆ.

ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಕ್ಕವರಿದ್ದಾಗ ಸ್ವತಃ ಬಡತನವನ್ನು ಅನುಭವಿಸಿ ಬಡಜನತೆಯ ಬದುಕನ್ನು ಕಣ್ಣಾರೆ ಕಂಡವರು. ಆಗ ಗ್ರಾಮೀಣ ಬಡಜನತೆಗೆ ಅನ್ನವೆಂಬುದು ಅಪರೂಪದ ಸಂಗತಿಯಾಗಿತ್ತು. ಅದರಲ್ಲೂ ಬಡ ಮಕ್ಕಳು ಕಾಯಿಲೆಯಿಂದ ಬಳಲುತ್ತಿದ್ದರೆ ಅಂಥ ಮಕ್ಕಳಿಗೆ ಗಂಜಿಯೇ ಆಹಾರ. ಅದಕ್ಕಾಗಿ ಬಡಜನತೆ ತಮ್ಮ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಉಳ್ಳವರ ಮನೆಬಾಗಿಲ ಮುಂದೆ ತುತ್ತು ಅನ್ನಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದ ದೃಶ್ಯಾವಳಿಗಳು ಸಿದ್ದರಾಮಯ್ಯರನ್ನು ಇನ್ನಿಲ್ಲದಂತೆ ಘಾಸಿಗೊಳಿಸಿದ್ದವು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪರಿಸ್ಥಿತಿಗಳು ಯಥಾವತ್ ಮುಂದುವರೆದಿವೆ.
1bng1

ಹೀಗಾಗಿ ಹಸಿವು ಮುಕ್ತ ಸಮಾಜವನ್ನು ಮೊದಲ ಆದ್ಯತೆಯಾಗಿಸಿಕೊಂಡ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ‘ಅನ್ನಭಾಗ್ಯ ಯೋಜನೆ’ಯನ್ನು ಜಾರಿಗೆ ತಂದರು. ಈ ಮಹತ್ಕಾರ್ಯಕ್ಕೆ ವಿರೋಧ ಪಕ್ಷದವರಿಂದ ಭಾರೀ ವಿರೋಧ ವ್ಯಕ್ತವಾದರೂ ಸಹ ನಾಡಿನ ಸಹೃದಯ ಜನರು ಸಿದ್ದರಾಮಯ್ಯರ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸಿದರು.

ಹಸಿವು ಮುಕ್ತಗೊಳಿಸುವ ಮಹತ್ತರ ಉದ್ದೇಶವಿಟ್ಟುಕೊಂಡು ಬಂದ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ ಯೋಜನೆ’ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರೀ ಯಶಸ್ಸನ್ನು ಕಂಡಿದೆ. ಬಡತನದ ರೇಖೆಗಿಂತ ಕೆಳಗಿರುವ 1.09 ಕೋಟಿ ಕುಟುಂಬಗಳು ಈ ಯೋಜನೆಯ ಫಲ ಪಡೆದಿದ್ದಾರೆ. ಹೆಚ್ಚಿನ ಪೌಷ್ಠಿಕತೆಯನ್ನು ಪಡೆಯುವ ಸಲುವಾಗಿ ಬಡವರಿಗೆ ಅಕ್ಕಿಯೊಂದಿಗೆ ಬೇಳೆಯನ್ನೂ ಸಹ ನೀಡಲಾಗುತ್ತಿದೆ. ಅಲ್ಲದೇ ಪ್ರದೇಶವಾರು ಆಹಾರ ಪದ್ಧತಿಗೆ ಅನುಗುಣವಾಗಿ ಉಚಿತ ಅಕ್ಕಿ ಜೊತೆಗೆ ರಾಗಿ, ಜೋಳ, ಕುಚಲಕ್ಕಿ ಮತ್ತು ಗೋದಿಯನ್ನು ಸಹ ನೀಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿರುವ ಉಚಿತ ಆಹಾರ ಧಾನ್ಯ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ. ಪ್ರತಿ ತಲೆಗೆ 5 ಕೆ.ಜಿ. ಯಿಂದ 7 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇನ್ನು ಹೊಸ ಪಡಿತರ ಚೀಟಿ ವಿತರಣೆಯನ್ನು ‘ಸಕಾಲ ಯೋಜನೆ’ಯಡಿ ಜಾರಿಗೆ ತರಲಾಗಿದ್ದು, ಇದರಿಂದ ಕೇವಲ 15 ದಿನಗಳೊಳಗಾಗಿ ಸ್ಪೀಡ್’ಪೋಸ್ಟ್ ಮೂಲಕ ಪಡಿತರ ಚೀಟಿ ಬಡವರ ಮನೆ ಬಾಗಿಲಿಗೇ ಬರಲಿದೆ. ದಾಸೋಹ ಯೋಜನೆಯಡಿ ನಾರಿನಿಕೇತನ, ವೃದ್ಧಾಶ್ರಮ, ಅಂಧ ಮಕ್ಕಳ ಶಾಲೆ, ನಿರಾಶ್ರಿತರ ಪುನರ್ವಸತಿ ಕೇಂದ್ರ ಸೇರಿದಂತೆ ಇತರ ಕೇಂದ್ರಗಳಿಗೆ ಅನ್ನಭಾಗ್ಯ ಮಾದರಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಒಟ್ಟಾರೆಯಾಗಿ ಅನ್ನಭಾಗ್ಯ ಯೋಜನೆಯ ಫಲವಾಗಿ ಉತ್ತರ ಕರ್ನಾಟಕ ಭಾಗದ ಜನತೆ ತಮ್ಮ ಮಕ್ಕಳೊಂದಿಗೆ ವಲಸೆ ಹೋಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

‘ನುಡಿದಂತೆ ನಡೆಯುತ್ತಿದ್ದೇವೆ’ ಎನ್ನುವ ಧ್ಯೇಯವಾಕ್ಯದೊಂದಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷಗಳಲ್ಲಿ ಜನಪರವಾದ ಆಡಳಿತ ನೀಡುವಲ್ಲಿ ಯಶ ಕಂಡಿದೆ ಎಂದೇ ಹೇಳಬಹುದು. ಯಾರೂ ಸಹ ಹಸಿವಿನಿಂದ ತೊಂದರೆ ಅನುಭವಿಸಬಾರದು ಎನ್ನುವ ನೆಲೆಯಲ್ಲಿ ಪರಿಚಯಿಸಿದ ‘ಅನ್ನಭಾಗ್ಯ ಯೋಜನೆ’ಯಲ್ಲಿ ನಿಜವಾದ ಮಾನವೀಯತೆಯು ಮೈದಾಳಿದೆ. ಬಸವಣ್ಣನವರಿಂದ ಪ್ರೇರಣೆ ಪಡೆದ ಸಿದ್ದರಾಮಯ್ಯ ಅವರ ಈ ಕ್ರಮದ ಹಿಂದೆ “ಹಸಿದವರಿಗೆ ಅನ್ನ ನೀಡಬೇಕು” ಎಂಬ ವಚನ ಚಳುವಳಿಯ ಆದರ್ಶನ ಗಾಢವಾದ ಪ್ರಭಾವ ಇದೆ.

Namma-Karntaka-Post_anna-Bhaagya-1

ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸರ್ಕಾರ ಪ್ರತಿವರ್ಷ ಉತ್ತಮ ರೀತಿಯಲ್ಲಿ ಅನುದಾನ ಕಲ್ಪಿಸಿದ್ದು, 2013-14ರಲ್ಲಿ 3,115 ಕೋಟಿ ರೂ., 2014-15ರಲ್ಲಿ 4,443 ಕೋಟಿ ರೂ., 2015-16ರಲ್ಲಿ 2,328 ಕೋಟಿ ರೂ., 2016-17ರಲ್ಲಿ 2,096 ಕೋಟಿ ರೂ. ಮತ್ತು 2017-18ರಲ್ಲಿ 3,636 ಕೋಟಿ ರೂ. ಅನುದಾನವನ್ನು ಕೊಡಲಾಗಿದೆ. ಕಳೆದ 5 ಬಜೆಟ್’ಗಳಲ್ಲಿ ಒಟ್ಟು 15,618 ಕೋಟಿ ರೂ. ಅನುದಾನವನ್ನು ‘ಅನ್ನಭಾಗ್ಯ ಯೋಜನೆ’ಗೆ ನೀಡಲಾಗಿದೆ.