/ anna-bhagya

ಹಸಿವು ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆದ ‘ಅನ್ನಭಾಗ್ಯ’

ರಾಜ್ಯದ ಬಡಜನತೆ ತುತ್ತು ಅನ್ನಕ್ಕಾಗಿ ಯಾರ ಬಳಿಯೂ ಕೈ ಚಾಚದೇ ಸ್ವಾಭಿಮಾನದಿಂದ ಬದುಕನ್ನು ನಡೆಸಬೇಕು ಎಂಬುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಶಯ. ಈ ಹಿನ್ನೆಲೆಯಲ್ಲಿ ಹಸಿವು ಮುಕ್ತ ಕರ್ನಾಟಕದ ಕನಸನ್ನು ಹೊತ್ತ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ‘ಅನ್ನಭಾಗ್ಯ ಯೋಜನೆ’ಯನ್ನು ಅನುಷ್ಠಾನಗೊಳಿಸಿದ್ದರು.

ಜನಪರ ಯೋಜನೆಗಳನ್ನು ಜಾರಿಗೆ ತರಲು ಅದರ ಹಿಂದೆ ಬಲವಾದ ಕಾರಣಗಳು ಪುಷ್ಟಿ ನೀಡಿರುತ್ತವೆ. ಇದೇ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬರಲು ಇದರ ಹಿಂದೆ ಅದರದೇ ಆದ ಒಂದು ಸಣ್ಣ ಕಥೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಂದಿನಲ್ಲಿ ಕಂಡ ಘಟನೆಯೇ ಅನ್ನಭಾಗ್ಯ ಯೋಜನೆ ಜಾರಿಗೆ ಬರಲು ಮುಖ್ಯ ಪ್ರೇರಣೆ.

ಹೌದು, ಸಿಎಂ ಸಿದ್ದರಾಮಯ್ಯನವರು ಚಿಕ್ಕವರಿದ್ದಾಗ ತುಂಬ ಹತ್ತಿರದಿಂದ ಬಡಜನತೆಯ ಬದುಕಿನ ಕ್ರಮವನ್ನು ನೋಡಿದವರು. ಬಡಜನತೆಗೆ ಅನ್ನದ ಊಟ ಎಂಬುದು ಹಬ್ಬ ಹರಿದಿನಗಳಿಗೆ ಸೀಮಿತವಾಗಿತ್ತು. ಒಂದು ಅರ್ಥದಲ್ಲಿ ಅನ್ನ ಬಡವರಿಗೆ ಅಮೃತವೇ ಆಗಿತ್ತು. ಅದರಲ್ಲೂ ಬಡ ಮಕ್ಕಳು ಕಾಯಿಲೆಯಿಂದ ಬಳಲುತ್ತಿದ್ದರೆ ಅಂಥ ಮಕ್ಕಳಿಗೆ ಅಕ್ಕಿಯ ಗಂಜಿಯೇ ಆಹಾರ. ಅದಕ್ಕಾಗಿ ಬಡಜನತೆ ತಮ್ಮ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಉಳ್ಳವರ ಮನೆಬಾಗಿಲ ಮುಂದೆ ತುತ್ತು ಅನ್ನಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದ ದೃಶ್ಯಾವಳಿಗಳು ಸಿದ್ದರಾಮಯ್ಯರನ್ನು ಇನ್ನಿಲ್ಲದಂತೆ ಕೆಣಕಿ ಕಾಡಿದ್ದವು. ಇದಕ್ಕೆಲ್ಲ ಪರಿಹಾರ ದೊರೆತ್ತಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿದ ಕ್ಷಣದಲ್ಲಿ.

ಸಿದ್ದರಾಮಯ್ಯ ಅವರು ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ‘ಅನ್ನಭಾಗ್ಯ ಯೋಜನೆ’ಯನ್ನು ಜಾರಿಗೆ ತಂದರು. ಇದಕ್ಕೆ ವಿರೋಧ ಪಕ್ಷದವರಿಂದ ಭಾರೀ ವಿರೋಧ ವ್ಯಕ್ತವಾದರೂ ನಾಡಿನ ಬುದ್ಧಿಜೀವಿಗಳು ಸಿದ್ದರಾಮಯ್ಯರ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸಿದರು.

ರಾಜ್ಯವನ್ನು ಹಸಿವು ಮುಕ್ತಗೊಳಿಸಲು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ ಯೋಜನೆ’ ನಾಲ್ಕು ವರ್ಷಗಳ ಅವಧಿಯಲ್ಲಿ ಯಶಸ್ವಿ ಕಾಣುತ್ತಲೇ ಬಂದಿದೆ. ಬಡತನದ ರೇಖೆಗಿಂತ ಕೆಳಗಿರುವ 1.09 ಕೋಟಿ ಕುಟುಂಬಗಳು ಈ ಯೋಜನೆಯ ಫಲ ಪಡೆದಿದ್ದಾರೆ. ಈ ಫಲಾನುಭವಿಗಳ ಕುಟುಂಬಗಳಿಗೆ ಅವರ ಪೌಷ್ಟಿಕಾಂಶದಲ್ಲಿ ಸಾಕಷ್ಟು ಪ್ರೋಟೀನ್’ಗಳು ದೊರೆಯುವುದನ್ನು ಖಾತರಿಪಡಿಸಲು ‘ಅನ್ನಭಾಗ್ಯ ಯೋಜನೆ’ಯ ಭಾಗವಾಗಿ ಒಂದು ಪಡಿತರ ಚೀಟಿಗೆ ಒಂದು ಕೆ.ಜಿ. ಬೇಳೆ ನೀಡುವುದನ್ನು ಪ್ರಸಕ್ತ ಸಾಲಿನಿಂದ ಚಾಲನೆ ನೀಡಲಾಗಿದೆ. ಪ್ರದೇಶವಾರು ಆಹಾರ ಪದ್ಧತಿಯ ಕ್ರಮವಾಗಿ ಉಚಿತ ಅಕ್ಕಿ ಜೊತೆಗೆ ರಾಗಿ, ಜೋಳ, ಕುಚಲಕ್ಕಿ ಮತ್ತು ಗೋದಿಯನ್ನು ನೀಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿರುವ ಉಚಿತ ಆಹಾರ ಧಾನ್ಯ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ. ಪ್ರತಿ ತಲೆಗೆ 5 ಕೆ.ಜಿ. ಯಿಂದ 7 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇನ್ನು ಹೊಸ ಪಡಿತರ ಚೀಟಿ ವಿತರಣೆಯನ್ನು ‘ಸಕಾಲ ಯೋಜನೆ’ ವ್ಯಾಪ್ತಿಗೆ ತರಲಾಗಿದ್ದು, ಇದರಿಂದ ಕೇವಲ 15 ದಿನಗಳೊಳಗಾಗಿ ಸ್ಪೀಡ್’ಪೋಸ್ಟ್ ಮೂಲಕ ಪಡಿತರ ಚೀಟಿ ಮನೆ ಬಾಗಿಲಿಗೆ ಬರಲಿದೆ. ದಾಸೋಹ ಯೋಜನೆಯಡಿ ನಾರಿನಿಕೇತನ, ವೃದ್ಧಾಶ್ರಮ, ಅಂಧ ಮಕ್ಕಳ ಶಾಲೆ, ನಿರಾಶ್ರಿತರ ಪುನರ್ವಸತಿ ಕೇಂದ್ರ ಸೇರಿದಂತೆ ಇತರ ಕೇಂದ್ರಗಳಿಗೆ ಅನ್ನಭಾಗ್ಯ ಮಾದರಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಒಟ್ಟಾರೆಯಾಗಿ ಅನ್ನಭಾಗ್ಯ ಯೋಜನೆಯ ಫಲವಾಗಿ ಉತ್ತರ ಕರ್ನಾಟಕ ಭಾಗದ ಜನತೆ ತಮ್ಮ ಮಕ್ಕಳೊಂದಿಗೆ ವಲಸೆ ಹೋಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

17620368_1526049750739043_7099655118577108519_o

‘ನುಡಿದಂತೆ ನಡೆಯುತ್ತಿದ್ದೇವೆ’ ಎನ್ನುವ ಧ್ಯೇಯದೊಂದಿಗೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷಗಳಲ್ಲಿ ಜನಸ್ಪರ್ಶಿಯಾದ ಆಡಳಿತ ನೀಡುವಲ್ಲಿ ಯಶಸ್ಸು ಸಾಧಿಸಿದೆ ಎಂದೇ ಹೇಳಬಹುದು. ಅನ್ನಕ್ಕಾಗಿ ಕೈ ಚಾಚಬಾರದು ಎನ್ನುವ ನೆಲೆಯಲ್ಲಿ ಪರಿಚಯಿಸಿದ ‘ಅನ್ನಭಾಗ್ಯ ಯೋಜನೆ’ಯಲ್ಲಿ ಮಾನವೀಯತೆ ಮೈದಳೆದಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸರ್ಕಾರ ಪ್ರತಿವರ್ಷ ಉತ್ತಮ ರೀತಿಯಲ್ಲಿ ಅನುದಾನ ಕಲ್ಪಿಸಿದ್ದು, 2013-14ರಲ್ಲಿ 3,115 ಕೋಟಿ ರೂ., 2014-15ರಲ್ಲಿ 4,443 ಕೋಟಿ ರೂ., 2015-16ರಲ್ಲಿ 2,328 ಕೋಟಿ ರೂ., 2016-17ರಲ್ಲಿ 2,096 ಕೋಟಿ ರೂ. ಮತ್ತು 2017-18ರಲ್ಲಿ 3,636 ಕೋಟಿ ರೂ. ಅನುದಾನವನ್ನು ಕೊಡಲಾಗಿದೆ. ಕಳೆದ 5 ಬಜೆಟ್’ಗಳಲ್ಲಿ ಒಟ್ಟು 15,618 ಕೋಟಿ ರೂ. ಅನುದಾನವನ್ನು ‘ಅನ್ನಭಾಗ್ಯ ಯೋಜನೆ’ಗೆ ನೀಡಲಾಗಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾಗಿ ಮೊದಲರ್ಧ ಭಾಗವನ್ನು ದಿನೇಶ್ ಗುಂಡೂರಾವ್ ಅವರು ಯಶಸ್ವಿಯಾಗಿ ನಿಭಾಯಿಸಿದರು. ನಂತರ ಆಹಾರ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಯು.ಟಿ.ಖಾದರ್ ಅವರು ಇಲಾಖೆಗೆ ಹೊಸ ಹೊಳಪನ್ನು ನೀಡಿ, ಬದ್ಧತೆಯಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಯು.ಟಿ.ಖಾದರ್ ಅವರು ಕೂಪನ್ ವ್ಯವಸ್ಥೆಯನ್ನು ನಗರ ಮತ್ತು ಪಟ್ಟಣಗಳಲ್ಲಿ ಜಾರಿಗೆ ತಂದಿದ್ದಾರೆ. ಇದರಿಂದ ಎಷ್ಟೋ ಜನತೆಗೆ ಅನುಕೂಲವಾಗಿದೆ. ಹೌದು, ವೈಯಕ್ತಿಕ ಕಾರಣಗಳಿಂದಾಗಿ ಜನರು ಬೇರೆ ಕಡೆ ವಾಸಿಸುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ತಮ್ಮ ತಾವು ಊರಿನಲ್ಲಿ ಇರದೇ ಇದ್ದ ಪಕ್ಷದಲ್ಲಿ ಪಡಿತರವನ್ನು ತಗೆದುಕೊಳ್ಳುವುದು ದುಸ್ತರವಾಗಿತ್ತು. ಇದಕ್ಕೆ ಬ್ರೇಕ್ ಹಾಕಿದ್ದೆ ಕೂಪನ್ ವ್ಯವಸ್ಥೆ.

ಈ ಕೂಪನ್ ವ್ಯವಸ್ಥೆಯಿಂದ ಪಡಿತರ ಚೀಟಿಯ ಫಲಾನುಭವಿಗಳು ರಾಜ್ಯದಲ್ಲಿ ಎಲ್ಲೇ ಇದ್ದರೂ ಪಡಿತರವನ್ನು ಪಡೆಯಬಹುದು. ಅದು ಪಡಿತರ ಮುಖ್ಯಸ್ಥರ ಮೊಬೈಲ್ ಗೆ ಆ ತಿಂಗಳ ಪಡಿತರ ಮಾಹಿತಿ ಬರುತ್ತದೆ. ಇದನ್ನು ಇಟ್ಟುಕೊಂಡು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಬಹುದಾಗಿದೆ.

anna_bhagya_1

ಪಡಿತರ ನಿರಾಕರಿಸಿದರೆ ದೂರು ನೀಡಿ
ಫಲಾನುಭವಿಗಳು ಪಡಿತರ ಪಡೆಯುವುದಕ್ಕಾಗಿ ನ್ಯಾಯಬೆಲೆ ಅಂಗಡಿಗೆ ಹೋದಾಗ ಯಾವುದೇ ಕಾರಣಕ್ಕೆ ಆಹಾರ ಪದಾರ್ಥ ನೀಡಲು ನಿರಾಕರಿಸಿದರೆ ಆಧಾರ್‌ ಸಂಖ್ಯೆಯೊಂದಿಗೆ ಜೋಡಣೆ ಆಗಿರುವ ಮೊಬೈಲ್‌ ಮೂಲಕ *161#ಗೆ ಕರೆ ಮಾಡಿ ದೂರು ನೀಡುವ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ.

“ಬಡವರು ತುತ್ತು ಅನ್ನಕ್ಕಾಗಿ ಬಹಳ ಸಂಕಟ ಪಡುವುದನ್ನು ಕಣ್ಣಾರೇ ಕಂಡಿದ್ದೇನೆ. ಹಾಗಾಗಿ ಬಡವರಿಗೆ ನ್ಯಾಯ ಒದಗಿಸಲು ನಾನು ಅಧಿಕಾರಕ್ಕೇ ಬಂದ ತಕ್ಷಣವೇ ‘ಅನ್ನಭಾಗ್ಯ’ ಯೋಜನೆಯನ್ನು ಜಾರಿಗೆ ತಂದೆ. ಕರ್ನಾಟಕ ಹಸಿವು ಮುಕ್ತವಾಗಬೇಕು ಎಂಬ ಬಹುದಿನದ ನನ್ನ ಕನಸು ನನಸಾಗಿದೆ ಅಂಥ ಅನ್ನಿಸಿದೆ.”
-ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ