/ Bengaluru

ಬಿಬಿಎಂಪಿ ಹಣಕಾಸು ನಿರ್ವಹಣೆ : ಖಾತೆಗಳ ಬಲವರ್ಧನೆ, ಆದಾಯ ಹೆಚ್ಚಿಸುವಿಕೆ, ಆಸ್ತಿ ತೆರಿಗೆ ಸುಧಾರಣೆ

ಹಿಂದಿನ ಸರ್ಕಾರಗಳು ಉಳಿಸಿಕೊಂಡೇ ಬಂದಿರುವ ಹಳೆಯ ಸಾಲಗಳನ್ನು ಚುಕ್ತಾ ಮಾಡಲು ಬಿಬಿಎಂಪಿಯು ಕಳೆದ ನಾಲ್ಕು ವರ್ಷಗಳಿಂದ ಹಣಕಾಸು ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಸದ್ಯದ ಬಿಬಿಎಂಪಿ ಆಡಳಿತ ವರ್ಗ ತಂದಿರುವ ಅತ್ಯಂತ ಮಹತ್ವದ ಕೆಲಸವೆಂದರೆ ಹಣಕಾಸು ಸುಧಾರಣೆಗೆ ಆದ್ಯತೆಯನ್ನು ನೀಡಿರುವುದು ಮತ್ತು ಸಾಲಗಳನ್ನು ಪುನರ್ರಚನೆ ಮಾಡಿರುವುದು, ಅನಗತ್ಯ ನಷ್ಟ ಮತ್ತು ಪಾವತಿಸದೇ ಉಳಿದ ಮೊತ್ತಗಳಿಂದ ಬಿಬಿಎಂಪಿಯನ್ನು ಮುಕ್ತಗೊಳಿಸಲು ಮತ್ತು ಹಣಕಾಸು ವ್ಯವಹಾರಗಳನ್ನು ಮತ್ತಷ್ಟು ಸುಸಜ್ಜಿತಗೊಳಿಸಲು ಖಾತೆಗಳನ್ನು ವಿವೇಚನಾಶೀಲಗೊಳಿಸಿರುವುದು.

ಈ ಮೇಲಿನ ಗುರಿಗಳನ್ನು ಸಾಧಿಸಲು ಇಟ್ಟಿರುವ ಹೆಜ್ಜೆಗಳು

ಅ. ಸಾಲಕ್ಕಾಗಿ ಹುಡ್ಕೊದಲ್ಲಿ ಅಡವಿಟ್ಟಿದ್ದ ಹನ್ನೊಂದು ಪಾರಂಪರಿಕ ಆಸ್ತಿಗಳನ್ನು ಮರಳಿ ಪಡೆಯಲು ಕ್ರಮವಹಿಸಿದೆ. ಒಟ್ಟು 1,676.85 ಕೋಟಿ ರೂಪಾಯಿ ಸಾಲವನ್ನು ಹುಡ್ಕೊ ದಿಂದ ಪಡೆದಿದ್ದ ಬಿಬಿಎಂಪಿ ಈಗಾಗಲೇ 1,171.29 ಕೋಟಿ ರೂಪಾಯಿ ಬಡ್ಡಿಯೊಂದಿಗೆ ಮರುಪಾವತಿಸಿದೆ. ಈ ಕ್ರಿಯೆಯ ಫಲಿತಾಂಶದಿಂದಾಗಿ ಬೆಂಗಳೂರಿನ ಮುಖ್ಯ ಪಾರಂಪರಿಕ ಆಸ್ತಿಗಳಾದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್ ಮಾರುಕಟ್ಟೆ, ಸಾರ್ವಜನಿಕ ಸೌಲಭ್ಯ ಕಟ್ಟಡ, ಮಯೋ ಹಾಲ್ ಕೋರ್ಟ್ ಹೌಸ್, ಕೆಂಪೇಗೌಡ ಮ್ಯೂಸಿಯಂ, ವೆಸ್ಟ್ ರೇಂಜ್ ಕಛೇರಿ, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ವಾಣಿಜ್ಯ ಕಟ್ಟಡ, ಮತ್ತು ಟ್ಯಾನರಿ ರಸ್ತೆಯ ಕಸಾಯಿಖಾನೆ ಮುಂತಾದವುಗಳು ಮತ್ತೆ ಬಿಬಿಎಂಪಿ ಕೈ ಸೇರಿವೆ.

ಆ. ಸದ್ಯದ 1,434 ಕೋಟಿ ರೂಪಾಯಿ ಸಾಲವನ್ನು ಬಿಬಿಎಂಪಿ ಮರುರಚಿಸಿ ಅತ್ಯಧಿಕವಾಗಿದ್ದ ಬಡ್ಡಿಯನ್ನು ಕಡಿಮೆಗೊಳಿಸಿ 112 ಕೋಟಿ ರೂಪಾಯಿಯಷ್ಟು ಉಳಿತಾಯ ಮಾಡಿದೆ.

ಇ. ಬಿಬಿಎಂಪಿ ಹೊಂದಿದ್ದ 623 ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ಏಕತ್ರಗೊಳಿಸಿ ಬಿಬಿಎಂಪಿಯ ಸಹಸಂಸ್ಥೆಗಳ ಖಾತೆಗಳನ್ನೂ ಸೇರಿಸಿಕೊಂಡು ಕೆನರಾ ಬ್ಯಾಂಕ್ ನಲ್ಲಿ 27 ಖಾತೆಗಳಾಗಿ ಪರಿವರ್ತಿಸಲಾಗಿದೆ. ಇದರಿಂದಾಗಿ ಬಿಬಿಎಂಪಿ ಹೆಚ್ಚುಬಡ್ಡಿಯನ್ನು ಗಳಿಸುವುದು ಮಾತ್ರವಲ್ಲದೆ, ಹಣಕಾಸು ನಿರ್ವಹಣೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನೂ ತಂದಿದೆ.

17240701_991006747696413_5780818450306799996_o

ಈ. ಗುತ್ತಿಗೆದಾರರಿಗೆ ಪಾವತಿಸದೇ ಉಳಿದಿದ್ದ 1,167 ಕೋಟಿ ರೂಪಾಯಿ ಮೊತ್ತದ 7,607 ಬಿಲ್ ಗಳನ್ನು ಪಾವತಿಸಲಾಗಿದೆ. ಇದರಲ್ಲಿ ಕೆಲವನ್ನು IFMS – ಸಂಯೋಜಿತ ಹಣಕಾಸು ನಿರ್ವಹಣೆ ವ್ಯವಸ್ಥೆ ಮೂಲಕ ಪಾವತಿಸಲಾಗಿದೆ.

ಉ. ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಎಲ್ಲ ವ್ಯವಹಾರಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಅಳವಡಿಸಲಾಗಿದೆ.

ಊ. ಪಾಲಿಕೆ ಸಂಪನ್ಮೂಲ ವಿಭಾಗವು ಆಸ್ತಿ ತೆರಿಗೆ ಪಾವತಿಸುವ ವಿಧಾನವನ್ನು ಮರುಶೋಧಿಸಿ ಬೆಂಗಳೂರಿನ ನಾಗರಿಕರಿಗೆ ಸರಳಗೊಳಿಸಿ ಕೊಟ್ಟಿದೆ. ಆಸ್ತಿ ತೆರಿಗೆಯನ್ನು ಲೆಕ್ಕಮಾಡಿ, ಇ-ಪಾವತಿ ಮಾಡಲು ಅನುಕೂಲವಾಗುವಂತೆ ಬಿಬಿಎಂಪಿ ವೆಬ್ ಸೈಟಿನ ಸಂಪನ್ಮೂಲ ಪೇಜ್ ನಾಗರಿಕರಿಗೆ ನಿರ್ದೇಶಿಸುತ್ತದೆ. ಈ ಕ್ರಮದಿಂದಾಗಿ ನಾಗರಿಕರಿಗೆ ಆಸ್ತಿ ತೆರಿಗೆ ಸರಳವಾಗಿ ಪಾವತಿಸಲು ನೆರವಾಗಿರುವುದಲ್ಲದೆ 2,103 ಕೋಟಿ ರೂಪಾಯಿಯ ಅತ್ಯಧಿಕ ದಾಖಲೆಯ ಆಸ್ತಿತೆರಿಗೆ ಸಂಗ್ರಹಣೆಗೆ ಸಹಾಯ ಮಾಡಿದೆ, ಪಾವತಿಸುವ ವಿಧಾನ ಸರಳಗೊಂಡಿದ್ದರಿಂದ ತೆರಿಗೆ ಪಾವತಿಯ ಹೆಚ್ಚಳವೂ ಸಾಧ್ಯವಾಗಿದೆ.
ಋ. ಬ್ಯಾಂಕ್ ಖಾತೆಗಳಲ್ಲಿ ಜಮೆಯಾದ ಮೊತ್ತದಿಂದ 45 ಕೋಟಿ ರೂಪಾಯಿ ಮೌಲ್ಯದ ಬಡ್ಡಿಯನ್ನು ಗಳಿಸಲಾಗಿದೆ.

ಎ. ಕೆರೆಗಳ ಪುನರುಜ್ಜೀವನಕ್ಕಾಗಿ ಪಡೆಯಲಾಗಿದ್ದ 22.16 ಕೋಟಿ ರೂಪಾಯಿಯನ್ನು ಕರ್ನಾಟಕ ನಗರಾಭಿವೃದ್ಧಿ ಮತ್ತು ಹಣಕಾಸು ನಿಗಮಕ್ಕೆ (KUIDFC) ಹಿಂದಿನ ಹಣಕಾಸು ಅವಧಿಯಲ್ಲಿ ಪಾವತಿಸಲಾಗಿದೆ.

ಆಡಳಿತವನ್ನು ಸುಲಭಗೊಳಿಸಲು ಮತ್ತು ಖಚಿತತೆಯನ್ನು ಕಾಪಾಡಲು ಬಿಬಿಎಂಪಿಗೆ ಸಂಬಂಧಿಸಿದ 1,10,814 ಫೈಲ್ ಗಳನ್ನು (77,44,590 ಪುಟಗಳು) ಡಿಜಿಟಲೀಕರಣಗೊಳಿಸಲಾಗಿದೆ. ಇದರಲ್ಲಿ ನೋಂದಾಯಿತ ಹಳೆಯ ಖಾತೆಗಳು, ಕಂದಾಯಕ್ಕೆ ಸಂಬಂಧಿಸಿದ ಪಂಚಾಯತಿಯ ದಾಖಲೆಗಳು, ಜನನ ಮತ್ತು ಮರಣ ನೋಂದಣಿಯ ದಾಖಲೆಗಳೂ ಸೇರಿವೆ.