ಬಿದಾಯಿ
ತಮ್ಮ ಮಗಳನ್ನು ಸರಿಯಾದ ಸಮಯದಲ್ಲಿ ಸೂಕ್ತವಾದ ಹುಡುಗನೊಂದಿಗೆ ಮದುವೆ ಮಾಡಿಕೊಡಬೇಕೆಂಬುದು ಪ್ರತಿಯೊಬ್ಬ ಪೋಷಕರ ಆಸೆಯಾಗಿರುತ್ತದೆ. ಆದರೆ ಅಲ್ಪಸಂಖ್ಯಾತ ಬಡ ಸಮುದಾಯಗಳಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದ್ದು ಅವರು ಸದಾ ಸಾಲದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಇಂತಹ ಬಡ ಸಮುದಾಯಗಳಿಗೆ ಸಹಾಯ ಮಾಡಿ ಅವರ ಬದುಕಿನ ಸಂತೋಷದ ಕ್ಷಣಗಳಿಗೆ ಸಹಕರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು 2013 ರಲ್ಲಿ ಬಿದಾಯಿ ಯೋಜನೆಯನ್ನು ಜಾರಿಗೊಳಿಸಿತು.
ಈ ಯೋಜನೆಯಡಿಯಲ್ಲಿ 18 ವರ್ಷ ಮೇಲ್ಪಟ್ಟ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಅವಿವಾಹಿತ, ವಿದವೆ ಮಹಿಳೆಯರಿಗೆ ಒಂದು ಬಾರಿ ಸರ್ಕಾರದ ವತಿಯಿಂದ 50,000 ರೂಪಾಯಿಗಳ ವರೆಗಿನ ಸಹಾಯ ಧನವನ್ನು ನೀಡಲಾಗುತ್ತಿದ್ದು ಇದು ಕುಟುಂಬ ಓರ್ವ ಸದಸ್ಯರಿಗೆ ಮಾತ್ರ ದೊರಕುವ ಅನುಕೂಲವಾಗಿದೆ. ಹಣವನ್ನು ವಿವಾಹವಾದ ನಂತರದಲ್ಲಿ ರಿಜಿಸ್ಟರ್ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಿದ ಮೇಲೆ ನೀಡಲಾಗುತ್ತದೆ. ಈ ವರೆಗೂ ಈ ಯೋಜನೆಯಡಿಯಲ್ಲಿ 208.26 ಕೋಟಿ ರೂಪಾಯಿಗಳ ವೆಚ್ಚದಲ್ಲಿ 48,242 ವಧುಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕರ್ನಾಟಕದಲ್ಲಿ ಬಹಳಷ್ಟು ಜನಪ್ರಿಯ ಯೋಜನೆಯಾಗಿರುವ ಇದೇ ಯೋಜನೆಯ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ಸಹ “ಶಾದಿ ಶುಗನ್” ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಈ ಯೋಜನೆಯ ಫಲಾನುಭವಿಗಳು ಮಾತ್ರ ಕೇವಲ ಮುಸ್ಲೀಮರಾಗಿದ್ದಾರೆ.
ಬಿದಾಯಿ ಯೋಜನೆಯ ಫಲಾನುಭಿವಗಳಾದ ಕಾರ್ಕಳದ ಬೈಲೂರಿನ ಮುಮ್ತಾಜ್ ಅವರು ಹೇಳುವಂತೆ “ ಈ ಯೋಜನೆಯು ನನ್ನಂತ ಬಡ ವರ್ಗದ ಮುಸ್ಲೀಂಮರಿಗೆ ಬಹಳಷ್ಟು ಸಹಕಾರಿಯಾಗಿದ್ದು, ನನ್ನ ಮುಂದಿನ ಬದುಕಿಗೆ ಮನೆಯನ್ನು ರೂಪಿಸಿಕೊಳ್ಳಲು ಪರೋಕ್ಷವಾಗಿ ನೆರವಾಗಿದೆ”.
ಈ ಯೋಜನೆಯನ್ನು ಮನಸಾರೆ ಹೊಗಳಿದ ಕೇಂದ್ರ ಅಲ್ಪ ಸಂಖ್ಯಾತರ ಇಲಾಖೆಯ ಸಚಿವರಾದ ನಜ್ಮಾ ಎ ಹೆಫ್ತುಲ್ಲಾ ಅವರು 2014 ರಲ್ಲಿ “ಕರ್ನಾಟಕ ರಾಜ್ಯದಿಂದ ದೇಶದ ಇತರೆ ರಾಜ್ಯಗಳು ಕಲಿಯಬೇಕಿದೆ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಡವರ ಹಸಿವಿಗೆ ನೆರವಾಗುವುದರೊಂದಿಗೆ ಅವರ ಸಂತಸದ ಕ್ಷಣಗಳಿಗೂ ನೆರವಾಗಬೇಕೆಂಬ ಸರ್ಕಾರದ ಮಾನವೀಯ ಕಾಳಜಿಗಳೇ ಸರ್ಕಾರದ ಧ್ಯೇಯೋದ್ದೇಶಗಳಾಗಿ ಕಾಣುತ್ತವೆ.