/ department

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಯುವಜನೆತೆಯು ರಾಜ್ಯದ ಅಮೂಲ್ಯ ಆಸ್ತಿಯಾಗಿದ್ದು ಅವರ ಕಾರ್ಯಕ್ಷಮತೆಯನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದು ಮುಖ್ಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ನೇತೃತ್ವದಲ್ಲಿ ಯುವಜನರಿಗೆ ಕ್ರೀಡೆ ಮತ್ತು ಇತರೆ ತರಬೇತಿ ಚಟುವಟಿಕೆಗಳನ್ನು ಉತ್ತೇಜಿಸುವ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.

“ ಮುಂದೆ ಒಲಂಪಿಕ್ ನಲ್ಲಿ ಪದಕಗಳನ್ನು ತರುವಷ್ಟರ ಮಟ್ಟಿಗೆ ಕರ್ನಾಟಕದ ಕ್ರೀಡಾಪಟುಗಳನ್ನು ಸಿದ್ಧಗೊಳಿಸಲಾಗುತ್ತಿದ್ದು ಕ್ರೀಡಾಳುಗಳು ಈ ಕನಸನ್ನು ನನಸು ಮಾಡಲು ಪ್ರಯತ್ನಿಸಬೇಕು”.
– ಪ್ರಮೋದ್ ಮಧ್ವರಾಜ್

ಮೂಲಸೌಕರ್ಯಗಳ ಅಭಿವೃದ್ಧಿ
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಮೈಸೂರು, ಉಡುಪಿ, ಮೂಡಬಿದರೆ, ಕಲ್ಬುರ್ಗಿ ಮತ್ತು ಧಾರವಾಡ ಜಿಲ್ಲಾ ಮೈದಾನಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಗಳನ್ನು ರೂಪಿಸಲಾಗಿದೆ.
ಇಷ್ಟೇ ಅಲ್ಲದೇ ಬಳ್ಳಾರಿ ನಗರದಲ್ಲಿ ಸಿಂಥೆಟಿಕ್ ಫುಟ್ ಬಾಲ್ ಟರ್ಫ್, ಮೈಸೂರು ಹಾಗೂ ಕೂರ್ಗ್ ನ ಪೊನ್ನಂಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಹಾಗೂ ಮಡಿಕೇರಿ, ಉಡುಪಿ, ಮೂಡಬಿದ್ರೆ, ಗಂಗಾಗವರಿ, ಹರಿಹರ ಮತ್ತು ವಿದ್ಯಾನಗರ (ಬೆಂಗಳೂರು) ದಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಕೊಳಗಳನ್ನು ನಿರ್ಮಿಸಲಾಗಿದೆ.
ಇದರೊಂದಿಗೆ ಚಾಮರಾಜನಗರ, ಮೈಸೂರು, ಉಡುಪಿ,ದಾವಣಗೆರೆ, ಹಳಿಯಾಳ ಮತ್ತು ಧಾರವಾಡದಲ್ಲಿ ಕ್ರೀಡಾ ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದೆ. ಗುಂಡ್ಲುಪೇಟೆ, ಜಮಖಂಡಿ, ಭದ್ರಾವತಿ, ಹಿರೇಕೇರೂರು , ಚಿಕ್ಕಬಳ್ಳಾಪುರ, ಕೋಲಾರ ಮತ್ತು ವಿದ್ಯಾನಗರ (ಬೆಂಗಳೂರು) ಇಲ್ಲಿ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಕಲ್ಬುರ್ಗಿ, ಚಿಕ್ಕಬಳ್ಳಾಪುರ, ಮಡಿಕೇರಿ ಮತ್ತು ಬಳ್ಳಾರಿಯಲ್ಲಿ 64.8 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಾಲ್ಕು ಕ್ರೀಡಾ ಶಾಲೆಗಳನ್ನು ನಿರ್ಮಿಸಲಾಗಿದೆ.

ಕರ್ನಾಟಕ ಕ್ರೀಡಾ ರತ್ನ
ಗ್ರಾಮೀಣ ಭಾಗದ ಕ್ರೀಡಾ ಪಡುಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಗಿದ್ದು ಪ್ರಶಸ್ತಿಯ ಮೌಲ್ಯ 1 ಲಕ್ಷ ರೂಪಾಯಿ ಆಗಿದೆ. ಇಲ್ಲಿಯವರೆಗೂ ಸ್ಥಳೀಯ/ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ವಲಯಕ್ಕೆ ಗಮನಾರ್ಹ ಕೊಡುಗೆ ನೀಡಿದ 335 ಯುಕರಿಗೆ 1 ಲಕ್ಷ ರೂಪಾಯಿಗಳಷ್ಟು ಪ್ರೋತ್ಸಾಹ ಧನವನ್ನು ವಿತರಿಸಲಾಗಿದೆ.

ಪಿಂಚಣಿ ಮತ್ತು ವಿದ್ಯಾರ್ಥಿ ವೇತನ
ಕ್ರೀಡಾ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು 1000 ದಿಂದ 10,000 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಮಾಜಿ ಕುಸ್ತಿ ಪಟುಗಳು ಮತ್ತು ಕ್ರೀಡಾಳುಗಳಿಗೆ ನಿಡುತ್ತಿದ್ದ ಇದರಿಂದ ಪಿಂಚಣಿಯನ್ನು ಕ್ರಮವಾಗಿ 2,500, 3000 ಮತ್ತು 4000 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದ್ದು ಇದರಿಂದ ಒಟ್ಟು 1,400 ಮಾಜಿ ಕ್ರೀಡಾಪಟುಗಳಿಗೆ ಪ್ರಯೋಜನವಾಗಿದೆ.

ಕ್ರೀಡಾಪಟುಗಳಿಗೆ ಉತ್ತೇಜನ
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಪೂರಕವಾಗುವಂತೆ ಆಯ್ಕೆ ಯಾದ 1000 ಕ್ರೀಡಾ ಪಟುಗಳಿಗೆ 1 ಲಕ್ಷ ರೂಪಾಯಿಗಳಷ್ಟು ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದ್ದು ಇದಕ್ಕಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡದಲ್ಲಿ ರಾಜ್ಯ ಒಲಂಪಿಕ್ ಕ್ರೀಡೆಗಳನ್ನು ಆಯೋಜಿಸಲಾಗಿದೆ.

ಕ್ರೀಡಾ ಅಕಾಡೆಮಿಗಳು
ಕರ್ನಾಟಕ ಸರ್ಕಾರದ ವತಿಯಿಂದ ವಿದ್ಯಾನಗರ ಬೆಂಗಳೂರು ಇಲ್ಲಿ ಬಾಸ್ಕೆಟ್ ಬಾಲ್ ಅಕಾಡೆಮಿ, ಉಡುಪಿಯಲ್ಲಿ ಈಜುಕೊಳ, ಮೈಸೂರಿನಲ್ಲಿ ಟೆನ್ನಿಸ್ ಹಾಗೂ ಚಿತ್ರದುರ್ಗದಲ್ಲಿ ಪರ್ವತಾರೋಹಣ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು ಪ್ರತಿಯೊಂದು ಅಕಾಡೆಮಿಗೆ 1 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಲಾಗಿರುತ್ತದೆ.

Namma-Karntaka-_youth_empowerment_and_sports

ಅತ್ಯಾಧುನಿಕ ಜಿಮ್ ಗಳು
ನಾಲ್ಕು ಕ್ರೀಡಾ ಹಾಸ್ಟೆಲ್ ಗಳಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಜಿಮ್ ಗಳನ್ನು ತೆರೆಯಲಾಗಿದೆ.

ಯುವ ಸ್ಪಂದನ ಕಾರ್ಯಕ್ರಮ
ಯುವಕರು ಎದುರಿಸುತ್ತಿರುವ ಮನೋ ಸಮಸ್ಯೆಗಳಿಗೆ ಪೂರಕ ಸ್ಪಂದನೆಯನ್ನು ನೀಡಲು ಇಲಾಖೆಯು ನಿಮ್ಹಾನ್ಸ್ ನವರ ಸಹಯೋಗದಲ್ಲಿ ಯುವಕರಿಗೆ ಮಾನಸಿಕ ಆರೋಗ್ಯ ಶಿಕ್ಷಣವನ್ನು ನೀಡುತ್ತಿವೆ. ಈ ಕಾರ್ಯಕ್ರಮದಡಿಯಲ್ಲಿ ಒಟ್ಟು 16ಲಕ್ಷ ಯುವಕರು ಇಲ್ಲಿಯವರೆಗೆ ಕೌನ್ಸಿಲಿಂಗ್ ಸೌಲಭ್ಯವನ್ನು ಪಡೆದಿದ್ದಾರೆ.

ಮಹಿಳೆಯರಿಗೆ ಅತ್ಯಾಧುನಿಕ ಹಾಸ್ಟೆಲ್ ಸೌಲಭ್ಯಗಳು
ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ತಲಾ 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಿಮ್ ಹಾಗೂ ಇತರೆ ಸೌಲಭ್ಯಗಳ ಸಮೇತ ಎರಡು ಸುಸಜ್ಜಿತ ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದ್ದು ರಾಜ್ಯದ ವಿವಿಧೆಡೆ ತಲಾ 1 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾ ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ವಿಕಲ ಚೇತನರಿಗೆ ಬೆಂಬಲ
2 ಕೋಟಿ ರೂಪಾಯಿ ಅನುದಾನದಲ್ಲಿ ವಿಕಲ ಚೇತನರಿಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ ಮತ್ತು 2 ಕೋಟಿ ರೂಪಾಯಿ ವೆಚ್ಚದಲ್ಲಿ ವಿಕಲ ಚೇತನರಿಗೆ ನೆರವಾಗುವಂತಹ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

ನಗದು ಪುರಸ್ಕಾರಗಳು
ಒಲಂಪಿಕ್ ನಲ್ಲಿ ಪದಕ ಜಯಿಸಿದವರಿಗೆ ನೀಡಲಾಗುವ ನಗದು ಪುರಸ್ಕಾರದ ಮೊತ್ತವನ್ನು ಚಿನ್ನಕ್ಕೆ 5 ಕೋಟಿ, ಬೆಳ್ಳಿ ಪದಕಕ್ಕೆ 3 ಕೋಟಿ ಮತ್ತು ಕಂಚಿನ ಪದಕಕ್ಕೆ 2 ಕೋಟಿ ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಸರ್ಕಾರೀ ಇಲಾಖೆಗಳಲ್ಲಿ ಒಲಂಪಿಕ್ ಪದಕ ವಿಜೇತರಿಗೆ “ಎ” ಗ್ರೇಡ್ ಹುದ್ದೆ ಮತ್ತು ಏಷ್ಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಜಯಿಸಿದವರಿಗೆ “ಬಿ” ಗ್ರೇಡ್ ಹುದ್ದೆಯನ್ನು ನೀಡಲಾಗುತ್ತಿದೆ.

ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ
ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕ್ರೀಡಾ ಸಾಧಕರಿಗೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದ್ದು ಇದರ ಮೌಲ್ಯವು 5 ಲಕ್ಷ ರೂಪಾಯಿಗಳಾಗಿವೆ.

ಯುವ ಚೈತನ್ಯ
ಯುವಕರಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಪೂರಕವಾಗುವಂತೆ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲಾಗುವುದು. ಅಷ್ಟೇ ಅಲ್ಲದೇ ಈ ಯೋಜನೆಯ ಯಶಸ್ವೀ ಅಳವಡಿಕೆಗಾಗಿ 20 ಕೋಟಿ ರೂಪಾಯಿಗಳ ಅನುದಾನವನ್ನು ನಿಗದಿ ಮಾಡಲಾಗಿದ್ದು 5 ಕೋಟಿ ರೂಪಾಯಿಗಳ ಆವರ್ತ ನಿಧಿಯನ್ನು ನಿಗದಿ ಪಡಿಸಲಾಗಿದೆ.

ಕ್ರೀಡಾ ಮಾಹಿತಿ ಕೇಂದ್ರ
1 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾ ಪಟುಗಳ ಸಾಧನೆಯನ್ನು ಮತ್ತು ಪರಿಚಯವನ್ನು ಬಿತ್ತರಿಸುವ ವ್ಯವಸ್ಥೆ ಇದಾಗಿದ್ದು ಇದರಿಂದ ಎಲೆ ಮರೆಯ ಕಾಯಂತಿರುವ ಕ್ರೀಡಾ ಸಾಧಕರನ್ನು ಎಲ್ಲರಿಗೂ ಪರಿಚಯಿಸುವುದು ಮತ್ತು ಆ ಮೂಲಕ ಅವರಿಗೆ ಅವಕಾಶಗಳನ್ನು ಕಲ್ಪಿಸಿವುದು ಇದರ ಗುರಿಯಾಗಿದೆ. ಕ್ರೀಡಾ ಸೌಲಭ್ಯಗಳ ಮತ್ತು ಪ್ರಶಸ್ತಿ ಪುರಸ್ಕಾರಗಳ ಕುರಿತಂತೆ ಪಾರದರ್ಶಕತೆಯನ್ನು ಕಾಪಾಡಲು ಇದು ನೆರವಾಗುತ್ತದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Youth-Employment-and-Sports