/ department

ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ

ಇದು ರಾಜ್ಯ ಸರ್ಕಾರದ ಅತಿ ಪ್ರಮುಖ ಇಲಾಖೆಯಾಗಿದ್ದು ರಾಜ್ಯದ ಎಲ್ಲಾ ಜನರನ್ನು ತಲುಪುವಂತಹ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿದೆ. ಸಾರ್ವಜನಿಕರಿಗೆ ಆಹಾರ ಭದ್ರತೆಯನ್ನು ಒದಗಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆಯನ್ನು ನಿರ್ಧರಿಸುವುದು ಇದರ ಉದ್ದೇಶವಾಗಿದೆ. ಸಾರ್ವಜನಿಕರ ವಿತರಣೆಯ ಸಂದರ್ಭದಲ್ಲಿ ಕಲಬೆರಕೆ ಆಗುವುದನ್ನು ತಡೆಗಟ್ಟುವುದು, ಆಹಾರ ಧಾನ್ಯಗಳ ಗುಣಮಟ್ಟ ಮತ್ತು ಪ್ರಮಾಣವು ಸೂಕ್ತವಾಗಿ ಇರುವುದೇ ಎಂದು ಗಮನಹರಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಇಲಾಖೆಯು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ಪ್ರಸ್ತುತ ಸಚಿವ ಶ್ರೀ.ಯು.ಟಿ.ಖಾದರ್ ಮತ್ತು ಈ ಹಿಂದಿನ ಸಚಿವ ಶ್ರೀ.ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ಬಡವರ ಜೀವನಕ್ಕೆ ಶಕ್ತಿ ತುಂಬುವಂತಹ ಕೆಲಸವನ್ನು ಮಾಡಿದೆ. ಇಲಾಖೆಯ ವತಿಯಿಂದ ಬಡವರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು ಅವು ಈ ಕೆಳಕಂಡಂತಿವೆ:

ಅನ್ನಭಾಗ್ಯ
ಹಸಿವು ಮುಕ್ತ ಕರ್ನಾಟಕದ ಮಹತ್ತರ ಕನಸನ್ನು ಹೊತ್ತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ದಿನವೇ ಬಡ ಜನರಿಗಾಗಿ ‘ಅನ್ನಭಾಗ್ಯ ಯೋಜನೆ’ಯನ್ನು ಅನುಷ್ಠಾನಗೊಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಕ್ಕವರಿದ್ದಾಗ ಸ್ವತಃ ಬಡತನವನ್ನು ಅನುಭವಿಸಿ ಬಡಜನತೆಯ ಬದುಕನ್ನು ಕಣ್ಣಾರೆ ಕಂಡವರು. ಆಗ ಗ್ರಾಮೀಣ ಬಡಜನತೆಗೆ ಅನ್ನವೆಂಬುದು ಅಪರೂಪದ ಸಂಗತಿಯಾಗಿತ್ತು. ಅದರಲ್ಲೂ ಬಡ ಮಕ್ಕಳು ಕಾಯಿಲೆಯಿಂದ ಬಳಲುತ್ತಿದ್ದರೆ ಅಂಥ ಮಕ್ಕಳಿಗೆ ಗಂಜಿಯೇ ಆಹಾರ. ಅದಕ್ಕಾಗಿ ಬಡಜನತೆ ತಮ್ಮ ಮಕ್ಕಳ ಆರೋಗ್ಯವನ್ನು ಸುಧಾರಿಸಲು ಉಳ್ಳವರ ಮನೆಬಾಗಿಲ ಮುಂದೆ ತುತ್ತು ಅನ್ನಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದ ದೃಶ್ಯಾವಳಿಗಳು ಸಿದ್ದರಾಮಯ್ಯರನ್ನು ಇನ್ನಿಲ್ಲದಂತೆ ಘಾಸಿಗೊಳಿಸಿದ್ದವು. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಇಂತಹ ಪರಿಸ್ಥಿತಿಗಳು ಯಥಾವತ್ ಮುಂದುವರೆದಿವೆ.

ಹೀಗಾಗಿ ಹಸಿವು ಮುಕ್ತ ಸಮಾಜವನ್ನು ಮೊದಲ ಆದ್ಯತೆಯಾಗಿಸಿಕೊಂಡ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ‘ಅನ್ನಭಾಗ್ಯ ಯೋಜನೆ’ಯನ್ನು ಜಾರಿಗೆ ತಂದರು. ಈ ಮಹತ್ಕಾರ್ಯಕ್ಕೆ ವಿರೋಧ ಪಕ್ಷದವರಿಂದ ಭಾರೀ ವಿರೋಧ ವ್ಯಕ್ತವಾದರೂ ಸಹ ನಾಡಿನ ಸಹೃದಯ ಜನರು ಸಿದ್ದರಾಮಯ್ಯರ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸಿ ಅವರ ಜನಪರವಾದ ಕ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಹಸಿವು ಮುಕ್ತಗೊಳಿಸುವ ಮಹತ್ತರ ಉದ್ದೇಶವಿಟ್ಟುಕೊಂಡು ಬಂದ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ ಯೋಜನೆ’ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರೀ ಯಶಸ್ಸನ್ನು ಕಂಡಿದೆ. ಬಡತನದ ರೇಖೆಗಿಂತ ಕೆಳಗಿರುವ 1.09 ಕೋಟಿ ಕುಟುಂಬಗಳು ಈ ಯೋಜನೆಯ ಫಲ ಪಡೆದಿದ್ದಾರೆ. ಹೆಚ್ಚಿನ ಪೌಷ್ಠಿಕತೆಯನ್ನು ಪಡೆಯುವ ಸಲುವಾಗಿ ಬಡವರಿಗೆ ಅಕ್ಕಿಯೊಂದಿಗೆ 1 ಕೆಜಿ ಬೇಳೆಯನ್ನೂ ಸಹ ನೀಡಲಾಗುತ್ತಿದೆ. ಅಲ್ಲದೇ ಪ್ರದೇಶವಾರು ಆಹಾರ ಪದ್ಧತಿಗೆ ಅನುಗುಣವಾಗಿ ಉಚಿತ ಅಕ್ಕಿ ಜೊತೆಗೆ ರಾಗಿ, ಜೋಳ, ಕುಚಲಕ್ಕಿ ಮತ್ತು ಗೋದಿಯನ್ನು ಸಹ ನೀಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆ ಅಡಿ ನೀಡುತ್ತಿರುವ ಉಚಿತ ಆಹಾರ ಧಾನ್ಯ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ. ಪ್ರತಿ ತಲೆಗೆ 5 ಕೆ.ಜಿ. ಯಿಂದ 7 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸರ್ಕಾರವು ಪ್ರತಿವರ್ಷ ಉತ್ತಮ ರೀತಿಯಲ್ಲಿ ಅನುದಾನ ಕಲ್ಪಿಸುತ್ತಿದ್ದು, 2013-14ರಲ್ಲಿ 3,115 ಕೋಟಿ ರೂ., 2014-15ರಲ್ಲಿ 4,443 ಕೋಟಿ ರೂ., 2015-16ರಲ್ಲಿ 2,328 ಕೋಟಿ ರೂ., 2016-17ರಲ್ಲಿ 2,096 ಕೋಟಿ ರೂ. ಮತ್ತು 2017-18ರಲ್ಲಿ 3,636 ಕೋಟಿ ರೂ. ಅನುದಾನವನ್ನು ಕೊಡಲಾಗಿದೆ. ಕಳೆದ 5 ಬಜೆಟ್’ಗಳಲ್ಲಿ ಒಟ್ಟು 15,618 ಕೋಟಿ ರೂ. ಅನುದಾನವನ್ನು ‘ಅನ್ನಭಾಗ್ಯ ಯೋಜನೆ’ಗೆ ನೀಡಲಾಗಿದೆ.

ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ (ಎಪಿಎಲ್ )’
ಅನ್ನಭಾಗ್ಯ ಯೋಜನೆಯಡಿಯಲ್ಲಿ ಎಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ತಲಾ 5 ಕೆ.ಜಿ. ಆಹಾರ ಧಾನ್ಯ ಮತ್ತು ಕುಟುಂಬಕ್ಕೆ ಗರಿಷ್ಠ 10 ಗಳ ಆಹಾರ ಧಾನ್ಯವನ್ನು ವಿತರಿಸಲಾಗುತ್ತಿದೆ.

ಸಕಾಲ
ಹೊಸ ಪಡಿತರ ಚೀಟಿ ವಿತರಣೆಯನ್ನು ‘ಸಕಾಲ ಯೋಜನೆ’ಯಡಿ ಜಾರಿಗೆ ತರಲಾಗಿದ್ದು, ಇದರಿಂದ ಕೇವಲ 15 ದಿನಗಳೊಳಗಾಗಿ ಸ್ಪೀಡ್’ಪೋಸ್ಟ್ ಮೂಲಕ ಪಡಿತರ ಚೀಟಿ ಬಡವರ ಮನೆ ಬಾಗಿಲಿಗೇ ಬರುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ದಾಸೋಹ ಯೋಜನೆ
ಅನಾಥಾಶ್ರಮ, ವೃದ್ಧಾಶ್ರಮ, ಅಂಧ ಮಕ್ಕಳ ಶಾಲೆ, ಬಡವರಿಗೆ ವಸತಿ ನಿಲಯಗಳು, ಭಿಕ್ಷುಕರ ಪುನರ್ವಸತಿ ಕೇಂದ್ರಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದ್ದು ಈವರೆಗೂ ಸಾವಿರಾರು ನಿರ್ಗತಿಕ ಜನರು, ಮಕ್ಕಳು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಅನಿಲ ಭಾಗ್ಯ
ಕರ್ನಾಟಕವನ್ನು ಸೀಮೆಎಣ್ಣೆ ಮುಕ್ತ ಮಾಡುವ ಉದ್ದೇಶದಿಂದ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕ ಸೌಲಭ್ಯವನ್ನು ನೀಡಲಾಗಿದ್ದು ಇದರೊಡನೆ ಎರಡು ಬರ್ನರ್ ಸ್ಟವ್, ರೆಗ್ಯುಲೇಟರ್ ಹಾಗೂ ಎರಡು ಬಾರಿ ಅಡುಗೆ ಅನಿಲವನ್ನು ತುಂಬಿ ಕೊಡುವ ಸೌಲಭ್ಯವನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಹೊಗೆಯಿಂದ ತೊಂದರೆ ಅನುಭವಿಸಬಾರದೆಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಪ್ರತಿ ಗ್ಯಾಸ್ ಸಂಪರ್ಕದ ಮೇಲೆ 4,040 ರೂಪಾಯಿಗಳನ್ನು ಹೂಡಿಕೆ ಮಾಡಿದ್ದು ಒಟ್ಟು 1,200 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ. ರಾಜ್ಯದಲ್ಲಿ ಈಗಾಗಲೇ ಒಟ್ಟು 35,44,479 ಬಿಪಿಎಲ್ ಕುಟುಂಬಗಳು ಈ ಸೌಲಭ್ಯಕ್ಕೆ ಅರ್ಹರಾಗಿದ್ದು ಇವರಲ್ಲಿ ಈಗಾಗಲೇ 2.5 ಲಕ್ಷ ಬಡ ಕುಟುಂಬಗಳು ಗ್ಯಾಸ್ ಸಂಪರ್ಕ ಸೌಲಭ್ಯವನ್ನು ಪಡೆದುಕೊಂಡಿವೆ.

Namma-Karntaka-Food---Uploaded

ಸೇವಾಸಿಂಧು
ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಸೇವಾ ಸಿಂಧು ಕೇಂದ್ರಗಳನ್ನಾಗಿ ಮಾರ್ಪಾಡುಗೊಳಿಸಲಾಗಿದ್ದು ನ್ಯಾಯ ಬೆಲೆ ಅಂಗಡಿ ಜಾಗೃತಿ ಸಮಿತಿಗಳನ್ನು ರಚಿಸಿ ಸಾರ್ವಜನಿಕ ಲೆಕ್ಕ ಪತ್ರಗಳನ್ನು ಪೂರ್ಣಗೊಳಿಸಲಾಗಿದೆ.

ಪುನರ್ ಬೆಳಕು ಯೋಜನೆ
ಸೀಮೆಎಣ್ಣೆ ದೀಪ ಮುಕ್ತ ರಾಜ್ಯವನ್ನಾಗಿಸುವ ದೃಷ್ಟಿಯಿಂದ ರೇಷನ್ ಕಾರ್ಡ್ ಹೊಂದಿದವರಿಗೆ ರೀಚಾರ್ಜ್ ಮಾಡಬಹುದಾದ ಎಲ್ ಇಡಿ ದೀಪಗಳನ್ನು ಸೀಮೆಎಣ್ಣೆ ಬದಲಿಗೆ ವಿತರಿಸಲಾಗುತ್ತಿದೆ. ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿ ಗ್ರಾಹಕರ ದೂರು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು 3 ತಿಂಗಳ ಅವಧಿಯ ಒಳಗೆ ಗ್ರಾಹಕರ ದೂರುಗಳನ್ನು ಪರಿಹರಿಸಲು ಆದೇಶ ಹೊರಡಿಸಿದೆ.

ಇಲಾಖೆಗೆ ಸರ್ಕಾರ ನೀಡಿರುವ ಅನುದಾನದ ಪ್ರಮಾಣ

Department-of-Food--Civil-Supplies-and-Consumer-Affairs