/ Krishi Bhagya

ಅನ್ನದಾತನ ಬದುಕು ರೂಪಿಸಿದ ‘ಕೃಷಿಭಾಗ್ಯ’

ದೇಶದ ಬೆನ್ನೆಲುಬು ಕೃಷಿ ಕ್ಷೇತ್ರ. ಅನ್ನದಾತರು ತಮ್ಮನ್ನು ಭೂತಾಯಿಯೊಂದಿಗೆ ಅರ್ಪಿಸಿಕೊಂಡು ಉಳುಮೆ ಮಾಡದೇ ಹೋದರೆ ನಾವೆಲ್ಲ ತುತ್ತು ಅನ್ನಕ್ಕೂ ಹರಸಾಹಸ ಪಡಬೇಕಿತ್ತು. ಸತತವಾಗಿ ಭೀಕರ ಬರಗಾಲ ರಾಜ್ಯಕ್ಕೆ ಕಾಡುತ್ತಲೇ ಇದೆ. ಅನ್ನದಾತ ಕಂಗಾಲಾಗಿದ್ದಾನೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ರಾಜ್ಯದ ರೈತರ ಹಿತ ಕಾಪಾಡಲು ಶ್ರಮಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ಕೃಷಿ ಅಭಿವೃದ್ಧಿ ಪರಿಷತ್’ ಮುಖಾಂತರ ಕೃಷಿ ಸಂಬಂಧಿತ ವಿಷಯಗಳನ್ನು ನೇರವಾಗಿ ಉಸ್ತುವಾರಿ ಮಾಡಲಾಗುತ್ತಿದೆ.

Namma-Karntaka-Post_Krishi-Bhagya_2

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳೆಯಾಶ್ರಿತ ಪ್ರದೇಶದ ರೈತರ ಕೃಷಿ ಜೀವನವನ್ನು ಉತ್ತಮ ಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸ್ವಾಭಾವಿಕ ಸಂಪನ್ಮೂಲಗಳ ಜೊತೆಗೆ ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಈ ಕೃಷಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೃಷಿ ವಲಯದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಿಕೊಂಡು ಬಂದಿದೆ. ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ವಿತರಣೆ, ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನೆರಳು ಪರದೆ ನಿರ್ಮಾಣ ಮಾಡಲಾಗಿದೆ. ಕೆರೆಗಳನ್ನು ಪುನಶ್ಚೇತನಗೊಳಿಸಲು ಕೆರೆ ಸಂಜೀವಿನಿ ಯೋಜನೆ ಹಾಗೂ ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿ ಮಾಡಿ ಬರನಿರ್ವಹಣೆಯನ್ನು ಮಾಡಿದೆ.

ರಾಜ್ಯದಲ್ಲಿ ಇಂದು ರೈತರು ಸ್ವಾವಲಂಭಿಗಳಾಗಿ ಬದುಕುತ್ತಿದ್ದಾರೆ ಎಂದರೆ ಕೃಷಿಭಾಗ್ಯ ಯೋಜನೆಯಿಂದಲೇ ಹೇಳಬಹುದು. ಕರ್ನಾಟಕದಲ್ಲಿ ಹೆಚ್ಚಾಗಿ ಮಳೆಯಾಶ್ರಿತ ರೈತರೆ ಹೆಚ್ಚಾಗಿ ಇರುವುದರಿಂದ ದೊಡ್ಡ ಸಂಖ್ಯೆಯಲ್ಲಿರುವ ರೈತರ ಅಭಿವೃದ್ಧಿ ನಿಗಮದಲ್ಲಿ ರಾಜ್ಯ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.

ಸರ್ಕಾರವು ಜಾರಿ ತಂದಿರುವ ಕೃಷಿಭಾಗ್ಯ ಯೋಜನೆಯಿಂದ ನೀರನ್ನು ಬಳಸಿ ರೈತರು ಕೃಷಿಯನ್ನು ಮಾಡುತ್ತಿದ್ದಾರೆ. ಒಣಭೂಮಿ ರೈತರಿಗೆ ಕೃಷಿಭಾಗ್ಯ ಯೋಜನೆ ವರದಾನವಾಗಿದ್ದು. ಕೃಷಿಭಾಗ್ಯ ಯೋಜನೆಗಾಗಿ ಸರ್ಕಾರ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಕೃಷಿಹೊಂಡ ಮಾಡಿಕೊಂಡಿರುವ ರೈತರು ನೀರನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಯೋಜನೆಯ ಫಲವನ್ನು ಪಡೆದುಕೊಂಡ ರೈತರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆಯಿಂದ ಮನಸೂರೆಗೊಂಡಿದ್ದೇವೆ ಎಂದು ಸ್ವತಃ ರೈತರೆ ಹೇಳಿಕೊಂಡಿದ್ದಾರೆ.

ರೈತರು ಹೇಳುವುದೇನು?
ಹೀಗೆ ಸಾಮೂಹಿಕ ಜಾಲತಾಣದಲ್ಲಿ ಕೃಷಿ ಭಾಗ್ಯ ಫಲಾನುಭವಿ ಚಿನ್ನ ಸ್ವಾಮಿ ವಡ್ಡಗೆರೆಯವರು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ;
“ಸಿದ್ದರಾಮಯ್ಯ ಸರ್ಕಾರದ ಕೃಷಿ ಭಾಗ್ಯ ಫಲಾನುಭವಿ ನಾನು .ಮೊದಲ ಮಳೆಗೆ ತುಂಬಿದ ಕೃಷಿ ಹೊಂಡದಿಂದ ಜೋಳದ ಪೈರಿಗೆ ನೀರುಣಿಸಿದೆವು. ತಲೆಯಲ್ಲಿ ನೂರಾರು ಯೋಜನೆಗಳಿದ್ದರು ಸಧ್ಯ ಜಾರಿಯಲ್ಲಿ ವಿಳಂಬವಾಗುತ್ತಿದೆ. ತಿರುಗಾಟ ನಿಲ್ಲಿಸಿ ಹೊಲದ ಕೆಲಸಗಳಿಗೆ ಹೆಚ್ಚಿನ ಸಮಯಕೊಡಲು ತೀರ್ಮಾನಿಸಿದ್ದೇನೆ. ಮೊದಲ ಹಂತದ ಕೆಲಸ ಈಗ ಆರಂಭವಾಗಿದೆ.”

ಸಾಲಮನ್ನಾ
ರೈತರನ್ನು ಮುನ್ನೆಲೆಗೆ ತರಲು ಸರ್ಕಾರ ಅವಿರತ ಪ್ರಯತ್ನ ಪಡುತ್ತಲೇ ಇದೆ. ಅಷ್ಟಕ್ಕೇ ಸುಮ್ಮನಾಗದೇ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ವಿಚಾರದಲ್ಲಿ ನಯಾಪೈಸಾ ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆ ಕಲಾಪದಲ್ಲಿ ರೈತರ ಅಲ್ಪಾವಧಿ ಸಾಲಮನ್ನಾ ಮಾಡಿದ್ದಾರೆ. ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರೂ.ವರೆಗಿನ ರೈತರ ಸಾಲ ಮನ್ನಾವಾಗಿದೆ. ಇದರಿಂದಾಗಿ ರಾಜ್ಯದ 22, 27, 506 ರೈತರಿಗೆ ಅನುಕೂಲವಾಗಲಿದೆ. ಸಾಲಮನ್ನಾದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 8,167 ಕೋಟಿ ರೂಪಾಯಿ ನಷ್ಟವಾಗಲಿದ್ದರೂ ಅನ್ನದಾತರ ಬೆನ್ನಿಗೆ ಸರ್ಕಾರ ನಿಂತಿದ್ದರಿಂದ ಬರದಿಂದ ಕಂಗೆಟ್ಟ ರಾಜ್ಯದ ರೈತರಿಗೆ ತುಸು ನಿರಾಳತೆ ತಂದಿದೆ.
2014-15 ರಿಂದ ‘ಕೃಷಿಭಾಗ್ಯ’ ಯೋಜನೆ ಅನುಷ್ಠಾನಗೊಂಡಿದ್ದು, 25 ಜೆಲ್ಲೆಗಳ 131 ತಾಲ್ಲೂಕುಗಳು ‘ಕೃಷಿಭಾಗ್ಯ’ ವ್ಯಾಪ್ತಿಗೆ ಒಳಪಟ್ಟಿವೆ. ಈ ಯೋಜನೆಯನ್ನು ಒಂದು ಪ್ಯಾಕೇಜ್’ನಡಿ ಹಲವು ಘಟಕಗಳ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸ್ಥಳದಲ್ಲಿ ಮಣ್ಣಿನ ತೇವಾಂಶ ಸಂರಕ್ಷಿಸಲು ಕ್ಷೇತ್ರ ಬದುಗಳ ನಿರ್ಮಾಣ, ನೀರನ್ನು ಸಂಗ್ರಿಹಿಸಲು ಕೃಷಿಹೊಂಡ ನಿರ್ಮಾಣ ಜೊತೆಗೆ ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ. ಹೊಂಡದಿಂದ ನೀರು ಎತ್ತಲು ಡಿಸೇಲ್ ಪಂಪಸೆಟ್ ಹಾಗೂ ನೀರನ್ನು ಬೆಳೆಗೆ ಹಾಯಿಸಲು ಲಘು ನೀರಾವರಿ ಮತ್ತು ಸುಧಾರಿತ ಬೆಳೆ ಪದ್ಧತಿ, ಪಾಲಿಹೌಸ್ (ನೆರಳು ಪರದೆ) ಮನೆ ಪ್ರಮುಖ ಘಟಕಗಳಾಗಿವೆ.

ಈವರೆಗೂ ‘ಕೃಷಿಭಾಗ್ಯ’ ಯೋಜನೆಯಡಿ 1 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ. ಕೃಷಿಭಾಗ್ಯದಿಂದ ಶೇ.30ರಷ್ಟು ಇಳುವರಿ ಹೆಚ್ಚಾಗಿದೆ. 1.2 ಲಕ್ಷ ಕೃಷಿ ಹೊಂಡಗಳು ನಿರ್ಮಾಣವಾಗಿವೆ. ಕಳೆದ 5 ಬಜೆಟ್’ಗಳಲ್ಲಿ 1.121 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಪ್ಯಾಕೇಜ್ ರೂಪದಲ್ಲಿ ಇರುವುದರಿಂದ ಘಟಕಗಳ ಮೂಲಕ ರೈತರು ಸಹಾಯಧನ ಪಡೆದು ಸದುಪಯೋಗ ಪಡಿಸಿಕೊಂಡಿರುತ್ತಾರೆ. ಬೆಳೆಗಳ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸಿದ ಬೆಲೆಯ ಇರುವಿಕೆಯನ್ನು ಕಾಪಾಡಿಕೊಳ್ಳಲು ಮತ್ತು ಉತ್ತಮ ಆದಾಯ ಪಡೆಯುವಲ್ಲಿ ಯೋಜನೆಯೂ ಮಹತ್ವದ ಪಾತ್ರ ವಹಿಸಿದೆ.

“ಮಳೆಯಾಶ್ರಿತ ಪ್ರದೇಶದ ರೈತರು ವ್ಯರ್ಥವಾಗುವ ಮಳೆ ನೀರನ್ನು ಶೇಖರಣೆ ಮಾಡಿ ಬೆಳೆ ಬೆಳೆಯಲು ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಪ್ರಯೋಜನಕ್ಕೆ ಈ ಹಿಂದೆ ಲಾಟರಿ ಮೂಲಕ ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗುತಿತ್ತು. ಈಗ ಇಚ್ಛೆಯುಳ್ಳ ಎಲ್ಲ ರೈತರಿಗೂ ಯೋಜನೆಯ ಸೌಲಭ್ಯ ಪಡೆಯಲು ಅನುವಾಗುವಂತೆ ನೋಡಿಕೊಳ್ಳಲಾಗಿದೆ. ಹಾಗೆಯೇ ಮಳೆ ನೀರು ಸಂಗ್ರಹ ಮಾಡಿ ಮಳೆ ಕೈಕೊಟ್ಟಾಗ ಸಂಗ್ರಹವಾಗಿರುವ ನೀರನ್ನು ಮೋಟಾರ್‌ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಮೂಲಕ ಬಳಕೆ ಮಾಡಿಕೊಳ್ಳಲು ಕೃಷಿ ಭಾಗ್ಯ ಯೋಜನೆಯಡಿ ನೆರವು ನೀಡಲಾಗುತ್ತಿದೆ.”
- ಕೃಷ್ಣ ಬೈರೇಗೌಡ, ಕೃಷಿ ಸಚಿವರು