/ Krishi Yantra Dhare

ಶ್ರಮಿಕ ರೈತರಿಗೆ ಜೀವತುಂಬಿದ ‘ಕೃಷಿ ಯಂತ್ರಧಾರೆ’ ಯೋಜನೆ

ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಲು, ಕೃಷಿ ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಗುಣಮಟ್ಟವುಳ್ಳ ಹೆಚ್ಚಿನ ಇಳುವರಿ ಪಡೆಯಲು ನೆರವಾಗುವಂತೆ ರಾಜ್ಯದಲ್ಲಿ ‘ಕೃಷಿ ಯಾಂತ್ರೀಕರಣ’ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ.

ಈ ಯೋಜನೆಯಡಿ ರೈತರಿಗೆ ಸಹಾಯಧನವನ್ನು ನೀಡುವ ಮೂಲಕ ಉಳುಮೆಯಿಂದ ಕೊಯ್ಲಿನವರೆಗೆ ಉಪಯುಕ್ತವಾಗುವ ವಿವಿಧ ಕೃಷಿ ಉಪಕರಣಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರದ ಅನುದಾನ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಸಮನ್ವಯಗೊಳಿಸಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ ವಿವಿಧ ಯಂತ್ರೋಪಕರಣಗಳಿಗೆ ಸಹಾಯಧನ ಒದಗಿಸಲಾಗಿದೆ.

ರೈತರಿಗೆ ಗರಿಷ್ಟ ಮಿತಿ ರೂ.1.00 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ಈವರೆಗೂ ಕೃಷಿ ಯಾಂತ್ರೀಕರಣ ಯೋಜನೆಯಡಿ 10.5 ಲಕ್ಷ ರೈತರು ಕಡಿಮೆ ಬಾಡಿಗೆಗೆ ಕೃಷಿ ಯಂತ್ರಗಳು ಮತ್ತು ಕೃಷಿ ಸಂಸ್ಕರಣೆಯ ಸೌಲಭ್ಯ ಪಡೆದುಕೊಂಡಿದ್ದಾರೆ.
ರಾಜ್ಯಾದ್ಯಂತ ಸ್ಥಾಪಿಸಿರುವ 305 ಕೃಷಿ ಯಂತ್ರಧಾರೆ ಕೇಂದ್ರಗಳನ್ನು 4.3 ಲಕ್ಷ ರೈತರು ಬಳಕೆ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ರಸಗೊಬ್ಬರಕ್ಕಾಗಿ ಯಾವುದೇ ರೈತರು ನೊಂದಕೊಂಡಂತಹ ಅಹಿತಕರ ಘಟನೆಗಳು ನಡೆದಿಲ್ಲ.

Krishi-Yantra-Dhare---To-reduce-the-burden-of-farmers

‘ಕೃಷಿ ಯಂತ್ರಧಾರೆ’ ಯೋಜನೆಯಡಿ 490 ಹೋಬಳಿಗಳಲ್ಲಿ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದ ಹೋಬಳಿಗಳಲ್ಲಿ ಹೆಚ್ಚು ಕೇಂದ್ರಗಳ ಸ್ಥಾಪನೆಗೆ 122 ಕೋಟಿ ರೂ ಮೀಸಲಾಗಿಟ್ಟಿದೆ. ಉಳುವ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಸುಧಾರಿತ ತಾಂತ್ರಿಕತೆಗಳ ಅಳವಡಿಕೆಯನ್ನು ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು 100 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ನೀಡುತ್ತಿದೆ. ಕೃಷಿಯಂತ್ರ ಬಳಕೆಯನ್ನು ಪ್ರೋತ್ಸಾಹಿಸಲು ಒಟ್ಟು 174 ತಾಲ್ಲೂಕುಗಲ್ಲಿ ‘ಗ್ರಾಮೀಣ ಕೃಷಿ ಯಂತ್ರೋಪಕರಣ/ಸೇವಾ ಕೇಂದ್ರ’ಗಳನ್ನು ಆರಂಭಿಸಿದೆ.

ಕೃಷಿಕರನ್ನು ಬಹುವಾಗಿ ಪೀಡಿಸುವ ಸಮಸ್ಯೆಗಳನ್ನು ನಿವಾರಿಸಲು ಯಂತ್ರೋಪಕರಣ ಬಳಕೆಗೆ ಪ್ರಮುಖ ಆದ್ಯತೆ ನೀಡಲಾಗಿದ್ದು, ರೈತರಿಗೆ ಕೃಷಿ ಯಂತ್ರ ಹಾಗೂ ಇನ್ನಿತರ ಉಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು “ಕೃಷಿ ಯಂತ್ರಧಾರೆ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಕೇಂದ್ರಗಳ ಮೂಲಕ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಅತ್ಯಲ್ಪ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಟಿಲ್ಲರ್, ಟ್ರಾಕ್ಟರ್, ನಾಟಿಯಂತ್ರ, ಸ್ಪೇಯರ್, ಕಳೆ ನಿಯಂತ್ರಣ ಯಂತ್ರ, ಒಕ್ಕಣೆ ಯಂತ್ರ (ನೇಜಿ ಕಟಾವು ಯಂತ್ರ) ಮ್ತತಿತರ ಉಪಕರಣಗಳನ್ನು ರೈತರು ಕೊಂಡೊಯ್ಯಬಹುದಾಗಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಈಗಾಗಲೇ ಮಹತ್ತರವಾಗಿ ಯಶಸ್ಸು ಕಂಡಿದೆ.

ಕೃಷಿ ಯಂತ್ರಧಾರೆ ಯೋಜನೆಯಡಿ ಕಳೆದ 2 ವರ್ಷಗಳಲ್ಲಿ ರೂ. 341.15 ಲಕ್ಷ ಅನುದಾನದಲ್ಲಿ ಜಿಲ್ಲೆಯ 11 ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳ ಮೂಲಕ ರೈತರಿಗೆ ಆಧುನಿಕ ಕೃಷಿ ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸಲಾಗಿದೆ. ಇದಲ್ಲದೇ, ಯಂತ್ರಗಳ ಮೂಲಕ ಭತ್ತ ನಾಟಿ ಮಾಡುವ ರೈತರಿಗೆ ಪ್ರತೀ ಎಕರೆಗೆ ರೂ. 1600 ರಂತೆ ರಾಜ್ಯ ಸರಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಇದು ರೈತರಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಯಶಸ್ಸು ಕಂಡಿದೆ. ಇದಕ್ಕೆ ಒಂದು ಉದಾರಹರಣೆಯೆಂಬಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 8497 ರೈತರು ಕೃಷಿ ಯಂತ್ರಧಾರೆ ಪ್ರಯೋಜನ ಪಡೆದಿರುತ್ತಾರೆ.

ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ನಿರ್ವಹಿಸಲಾಗುತ್ತಿದೆ. ಇದಲ್ಲದೇ, ಕೃಷಿ ಯಂತ್ರಧಾರೆ ಕೇಂದ್ರವನ್ನು ನಿರ್ವಹಿಸುವವರಿಗೆ ರಾಜ್ಯ ಸರಕಾರ 75:25 ಆಧಾರದಲ್ಲಿ ಕೇಂದ್ರದ ವೆಚ್ಚವನ್ನು ಭರಿಸುತ್ತಿದ್ದು ರೈತರ ಪಾಲಿಗೆ ನಿಜಕ್ಕೂ ಇದೊಂದು ಅತ್ಯುತ್ತಮ ಯೋಜನೆಯಾಗಿ ನೆರವು ನೀಡುತ್ತಿದೆ.