/ Animal Husbandry

ಪಶುಭಾಗ್ಯ

ರೈತಾಪಿ ಜನರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪಶುಭಾಗ್ಯ ಯೋಜನೆ ಈ ನಿಟ್ಟಿನಲ್ಲಿ ಮಹತ್ವದ್ದು. ಮಳೆ ಇಲ್ಲದೇ ಬೆಳೆ ಕೈಕೊಟ್ಟರೇನಂತೆ ಪಶು ಸಾಕಾಣಿಕೆ ರೈತರ ನೆಮ್ಮದಿಯ ಬದುಕಿಗೆ ನಾಂದಿ ಹಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ಷೀರಕ್ರಾಂತಿಯಾಗಿ, ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಪಶು ಸಂಗೋಪನೆಯಿಂದ ಎಷ್ಟೋ ರೈತರ ಆರ್ಥಿಕ ಜೀವನ ಮಟ್ಟ ಸುಧಾರಿಸಿದೆ. ಹಾಗಾಗಿ ಪಶುಭಾಗ್ಯ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ ರೂ. 1.20 ಲಕ್ಷದವರೆಗೆ ಸಾಲ ಒದಗಿಸಿ ಹಸು, ಹಂದಿ, ಕೋಳಿ, ಆಡು, ಕುರಿ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ. ಸಹಕಾರ ಬ್ಯಾಂಕ್’ಗಳಿಂದ ಬಡ್ಡಿರಹಿತವಾಗಿ 50 ಸಾವಿರ ಸಾಲವನ್ನು ಮೇವು ಖರೀದಿಸಲು ಹಾಗೂ ಇತರೆ ಕೆಲಸಗಳಿಗೆ ಕೊಡಲಾಗುತ್ತದೆ. ಸರ್ಕಾರ ಹಮ್ಮಿಕೊಳ್ಳುವ ಕಾರ್ಯಾಗಾರಗಳಲ್ಲಿ ಈ ಯೋಜನೆಯ ಫಲಾನುಭವಿಗಳು ಹಾಜರಿದ್ದು, ತರಬೇತಿ ಪಡೆಯುವುದು ಕಡ್ಡಾಯವಾಗಿದೆ.

PashuBhagya

ಈ ಯೋಜನೆಯಡಿ ಎರಡು ಹಸುಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ರೂ. 1.20 ಲಕ್ಷದಷ್ಟು ಹಣವನ್ನು ಘಟಕ ವೆಚ್ಚವಾಗಿ ನಿಗದಿಗೊಳಿಸಲಾಗಿದೆ. 4 ಹಂದಿ ಸಾಕಣೆಗೆ ಧನಸಹಾಯ ನೀಡಲಾಗುತ್ತಿದ್ದು, 94 ಸಾವಿರ ರೂಗಳು ಇದರ ಘಟಕ ವೆಚ್ಚವಾಗಿದೆ. ಇಲ್ಲಿ ಆಡು ಸಾಕಣೆಗಾಗಿ 11 ಆಡುಗಳನ್ನು ನೀಡಲಾಗುತ್ತಿದ್ದು, ಇದರ ಘಟಕ ವೆಚ್ಚ 67,440 ರೂಗಳನ್ನು ಸರ್ಕಾರವು ಭರಿಸುತ್ತಿದೆ. ಹಾಗೆಯೇ ಮಾರಾಟದ ಉದ್ದೇಶಕ್ಕಾಗಿ 200 ಕೋಳಿ ಸಾಕಣೆಗಾಗಿ ₹ 85 ಸಾವಿರದಷ್ಟು ಧನಸಹಾಯವನ್ನು ಸರ್ಕಾರವು ನೀಡುತ್ತಿದೆ. ಆ ಮೂಲಕ ಕೃಷಿಯೇತರವಾಗಿ ಪಶು ಸಂಗೋಪನೆಯ ಮೂಲಕ ಬದುಕನ್ನು ರೂಪಿಸಿಕೊಳ್ಳುವವರಿಗಾಗಿ ಕರ್ನಾಟಕ ಸರ್ಕಾರವು ಪಶುಭಾಗ್ಯ ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತಂದು ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ.